ಬೆಂಗಳೂರು: ದೈವಿಕ ಕೃಪೆಯಿಂದ ಸಿಕ್ಕಿರುವ 5 ಕೆಜಿ ಚಿನ್ನಾಭರಣ ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ 1.3 ಕೋಟಿ ರೂಪಾಯಿ ವಂಚಿಸಿರುವ ಘಟನೆ ನಗರದ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತೆಲಂಗಾಣ ಮೂಲದ ಆರೋಪಿ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಆರೋಪಿ ಭೂತಂ ಲಿಂಗಯ್ಯ ಸೆಲ್ವರಾಜ್ ಆಚಾರಿ ಅವರ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದನು. ಸೆಲ್ವರಾಜ್ ಅವರ ಸೊಸೆಯ ಅಸ್ತಮಾ ಕಾಯಿಲೆ ಹಾಗೂ ಸೆಲ್ವರಾಜ್ ಅವರ ಮಂಡಿನೋವಿಗೆ ಔಷಧ ನೀಡುವ ಮೂಲಕ ಪರಿಚಯ ಬೆಳೆಸಿಕೊಂಡಿದ್ದನು. ಸೆಲ್ವರಾಜ್ ಅಕ್ಕಸಾಲಿಗನೆಂಬ ಹಿನ್ನೆಲೆಯನ್ನು ತಿಳಿದುಕೊಂಡಿದ್ದ ಆರೋಪಿ, ಹಣ ಲಪಟಾಯಿಸುವ ದುರುದ್ದೇಶದಿಂದ ತನ್ನ ಬಳಿ ದೇವಿಯ ಕೃಪೆಯಿಂದ ದೊರೆತ 5 ಕೆಜಿ ಚಿನ್ನವಿದೆ ಎಂದು ನಂಬಿಸಿದ್ದನು. ದೊಡ್ಡ ಚಿನ್ನದ ಅಂಗಡಿ ಇಟ್ಟುಕೊಳ್ಳುವಂತೆ ಆಸೆ ಹುಟ್ಟಿಸಿದ್ದಲ್ಲದೆ, ಈ ಚಿನ್ನವನ್ನು ಖರೀದಿಸಿದರೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ನಂಬಿಸಿದ್ದನು.
ನಂಬಿಕೆ ಹುಟ್ಟಿಸಲು ಕಳೆದ ಒಂದೂವರೆ ವರ್ಷದ ಹಿಂದೆ ಪರೀಕ್ಷೆಗಾಗಿ ಅಸಲಿ ಚಿನ್ನದ ಸಣ್ಣ ನಾಣ್ಯವೊಂದನ್ನು ಸೆಲ್ವರಾಜ್ಗೆ ನೀಡಿದ್ದನು. ಅದನ್ನು ಪರೀಕ್ಷಿಸಿದಾಗ ಅದು ಅಸಲಿ ಚಿನ್ನ ಎಂಬುದು ಖಚಿತಗೊಂಡಿದ್ದರಿಂದ ಸೆಲ್ವರಾಜ್ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೆ, ದೇವರ ಮುಂದೆ ಪ್ರಮಾಣ ಮಾಡಿಸಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 1.3 ಕೋಟಿ ರೂಪಾಯಿಗಳನ್ನು ಪಡೆದಿದ್ದನು.
ಹಣಕ್ಕಾಗಿ ಸೆಲ್ವರಾಜ್ ತಮ್ಮ ಸ್ವಂತ ಜಮೀನು ಹಾಗೂ ಕುಟುಂಬದವರ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು. ಆದರೆ ದೀರ್ಘಕಾಲ ಕಳೆದರೂ ಚಿನ್ನವನ್ನು ನೀಡದೆ ಇದ್ದಾಗ ಅನುಮಾನಗೊಂಡು ಕರೆ ಮಾಡಿದ ಆರೋಪಿ, ತಂದೆಯ ಆರೋಗ್ಯ ಸರಿ ಇಲ್ಲವೆಂದು ಹೇಳಿ ಊರಿಗೆ ತೆರಳಿರುವುದಾಗಿ ನಾಟಕವಾಡಿದ್ದನು. ನಂತರ ಬೆಂಗಳೂರಿಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಮೋಸಹೋಗಿರುವುದನ್ನು ಅರಿತ ಸೆಲ್ವರಾಜ್ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.